ನರಸಿಂಹ 2 

ಸು. 1650. ಬ್ರಾಹ್ಮಣ ಕವಿ. ಮದನಮೋಹಿನಿ ಕಥೆಯ ಕರ್ತೃ. ಮೇಲುಕೋಟೆಯ ಶ್ರೀ ನರಸಿಂಹನ ಕೃಪೆಯಿಂದ ಕೃತಿಯನ್ನು ರಚಿಸುದುದಾಗಿ ಹೇಳಿದ್ದಾನೆ. 11 ಸಂಧಿಗಳು 860 ಪದ್ಯಗಳು ಇರುವ ಈ ಕೃತಿ ಸಾಂಗತ್ಯದಲ್ಲಿದೆ. ಇದೊಂದು ಪ್ರಣಯ ಕಥೆ. ತನ್ನ ಚಿಕ್ಕಮ್ಮನ ದ್ವೇಷಕ್ಕೆ ಗುರಿಯಾಗಿ ತಂದೆ ಚಂದ್ರಶೇಖರನ ಆಜ್ಞೆಯ ಮೇರೆಗೆ ರಾಜಧಾನಿ ಬಿಟ್ಟು ಹೊರಹೊರಟ ಜಯಸೇನನೆಂಬ ರಾಜಕುಮಾರ ಅನೇಕ ಸಾಹಸಗಳನ್ನು ಮಾಡಿ ಕೊನೆಗೆ ಮದನಮೋಹಿನಿ ಎಂಬ ಸುಂದರಿಯನ್ನು ಮದುವೆಯಾಗುತ್ತಾನೆ. ಇದು ಕಥೆ. ಕವಿಯ ಭಾಷೆ ಸರಳವೂ, ಸುಂದರವೂ, ರಾಗರಸಭರಿತವೂ, ಜಾನಪದ ಭಾಷೆಗೆ ಹತ್ತಿರದ್ದೂ ಆಗಿದೆ. ಅಲ್ಲಲ್ಲಿ ಲೋಕಾನುಭವಗಳ ರಮಣೀಯ ಹೋಲಿಕೆಗಳು ಬರುತ್ತವೆ.			
	(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ